ಟೈರ್ 1
ಪ್ರಾಚೀನ ಫಿನಿಷಿಯದ ಒಂದು ರೇವುಪಟ್ಟಣ. ಈಗಿನ ಲೆಬನಾನಿನಲ್ಲಿ ಬೇರೂತ್‍ನ ದಕ್ಷಿಣದಲ್ಲಿರುವ ಸೂರ್ ಎಂಬಲ್ಲಿದೆ. ಸಮುದ್ರ ತೀರದ ಸಣ್ಣ ದ್ವೀಪವೊಂದರ ಮೇಲೆ (ಈಗ ಇದು ಪರ್ಯಾಯದ್ವೀಪವಾಗಿದೆ) ಈ ಪಟ್ಟಣ ನಿರ್ಮಿತವಾಗಿತ್ತು ಇಲ್ಲಿ ಎರಡು ಸರ್ವಋತು ಬಂದರುಗಳಿದ್ದುದರಿಂದ ಇದೊಂದು ಸುರಕ್ಷಿತ ವ್ಯಾಪಾರಕೇಂದ್ರವಾಗಿತ್ತು. ಕ್ರಿ. ಪೂ. 14-13ನೆಯ ಶತಮಾನಗಳಲ್ಲಿ ಇದು ಈಜಿಪ್ಟಿನ ರಕ್ಷಣೆಯಲ್ಲಿತ್ತು. ಸಾಲೊಮನ್ನನ ಕಾಲದಲ್ಲಿ (ಕ್ರಿ. ಪೂ. 10ನೆಯ ಶತಮಾನ) ಇದು ಇಸ್ರೇಲಿನೊಂದಿಗೆ ನಿಕಟ ವ್ಯಾಪಾರಸಂಪರ್ಕ ಹೊಂದಿತ್ತು. ಸಾಗರೋತ್ತರ ವ್ಯಾಪಾರ ಚಟುವಟಿಕೆಯಲ್ಲಿ ಫಿನಿಷಿಯನರು ಪ್ರಮುಖರಾಗಿದ್ದರು. ಅಸ್ಸಿರಿಯನರ್ ದಾಳಿಗಳಿಂದಲೂ ಒಳಜಗಳಗಳಿಂದಲೂ ಇವರಲ್ಲಿ ಗುಂಪುಗುಳಿತನ ಹೆಚ್ಚಿದಾಗ, ಒಂದು ಗುಂಪಿನವರು ಕ್ರಿ. ಪೂ. 814ರಲ್ಲಿ ಉತ್ತರ ಆಫ್ರಿಕಕ್ಕೆ ವಲಸೆ ಹೋಗಿ ಸಮುದ್ರತೀರಗಳಲ್ಲಿ ಕಾರ್ತೇಜ್ ನಗರವನ್ನು ಸ್ಥಾಪಿಸಿದರು. ಅಸ್ಸಿರಿಯನ್ ದೊರೆ ಸೆನಾಚರಿಬ್ ಈ ನಗರವನ್ನು ಮುತ್ತಿದಾಗ ಇಲ್ಲಿಯ ಜನರು ತೀರಪ್ರದೇಶವನ್ನು ಪೂರ್ಣವಾಗಿ ತ್ಯಜಿಸಿ ತಮ್ಮ ದ್ವೀಪಕ್ಕೂ ಮುಖ್ಯಭೂಭಾಗಕ್ಕೂ ನಡುವೆ ಇದ್ದ ಸೇತುವೆಯನ್ನು ನಾಶಪಡಿಸಿ ದ್ವೀಪದಲ್ಲಿ ಆಶ್ರಯ ಪಡೆದರು. ಅನಂತರ ಬ್ಯಾಬಿಲಾನಿನ ದೊರೆ 2ನೆಯ ನೆಬುಕಡ್‍ನೆಜóರ್ 13 ವರ್ಷಗಳ ಕಾಲ (ಕ್ರಿ. ಪೂ. 585-573) ಇದಕ್ಕೆ ಮುತ್ತಿಗೆ ಹಾಕಿದ್ದ. ಟಿರಿಯನರು ಬ್ಯಾಬಿಲೋನಿಯನ್ ಆಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಟೈರ್ ಮತ್ತೆ ಪ್ರಗತಿಪಥದಲ್ಲಿ ಸಾಗಿತು. ಅಲೆಗ್ಸಾಂಡರ್ ಮಹಾಶಯ ಈ ದ್ವೀಪಕ್ಕೆ ಸೇತುವೆ ನಿರ್ಮಿಸಿ ಇದನ್ನು ಸೆದೆಬಡಿದ. ಸೆಲ್ಯೂಸಿಡ್ ಗ್ರೀಕರ ಮತ್ತು ರೋಮನರ ಆಶ್ರಯದಲ್ಲಿ ಟೈರ್ ಪುನಃ ಉಚ್ಛ್ರಾಯ ಹೊಂದಿತು. ಕ್ರೈಸ್ತ ಕೇಂದ್ರವಾಗಿದ್ದ ಟೈರ್ ನಗರವನ್ನು 636ರಲ್ಲಿ ಅರಬರು ಧರ್ಮಯುದ್ಧಗಳ ಕಾಲದಲ್ಲಿ ಮುಸ್ಲಿಮರು ಈ ನಗರವನ್ನು ಕ್ರೈಸ್ತರಿಂದ ಗೆದ್ದುಕೊಂಡು ನಾಶಗೊಳಿಸಿದರು (1291).
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ